ಜಿಯೋಮೆಟ್ರಿಡೀ
ಲೆಪಿಡಾಪ್ಟರ ಗಣದಲ್ಲಿನ ಒಂದು ದೊಡ್ಡ ಕುಟುಂಬ. ಸುಮಾರು 2000ಕ್ಕೂ ಹೆಚ್ಚು ಸಂಖ್ಯೆಯ ಪತಂಗ ಪ್ರಭೇದಗಳು ಇದಕ್ಕೆ ಸೇರಿವೆ. ಇವೆಲ್ಲವೂ ಸಣ್ಣ ಗಾತ್ರದ, ಸೂಕ್ಷ್ಮಪ್ರಕೃತಿಯ ಕೀಟಗಳು. ರೆಕ್ಕೆಗಳು ಅಗಲವಾಗಿವೆ; ರೆಕ್ಕೆಗಳ ಮೇಲೆ ನವುರಾದ ಮತ್ತು ಅಲೆಯಾಕಾರದ ರೇಖೆಗಳುಂಟು. ಕೆಲವು ಪ್ರಭೇದಗಳ ಹೆಣ್ಣುಗಳಲ್ಲಿ ರೆಕ್ಕೆಗಳೇ ಇಲ್ಲ. ಎಲ್ಲವೂ ನಿಶಾಚರಿಗಳು. ಈ ಪತಂಗಗಳ ಡಿಂಬಗಳಿಗೆ ಕುಣಿಕೆ ಹುಳಗಳು ಎಂದು ಹೆಸರು. ಇವು ಚಲಿಸುವಾಗ ದೇಹವನ್ನು ಕುಣಿಕೆಯಂತೆ ಬಗ್ಗಿಸುವುದರಿಂದ ಇವಕ್ಕೆ ಈ ಹೆಸರು ಬಂದಿದೆ. ಹೀಗೆ ಚಲಿಸುವಾಗ ಅದು ಭೂಮಿಯನ್ನು ಅಳೆಯುತ್ತಿರುವಂತೆ ಕಾಣುವುದರಿಂದ ಜಿಯೋಮೆಟ್ರಿಡೆ (ಉeo = ಭೂಮಿ, meಣಡಿಚಿ = ಅಳತೆ) ಎಂಬ ಅನ್ವರ್ಥನಾಮ ನೀಡಲಾಗಿದೆ. ಮರಿಗಳು ಸಾಮಾನ್ಯವಾಗಿ ತಾವು ತಿನ್ನುವ ಗಿಡಗಳ ಅಥವಾ ಅವುಗಳ ಎಲೆಯ ದಿಂಡಿನ ಭಾಗಗಳ ಬಣ್ಣವನ್ನು ಹೋಲುತ್ತವೆ. ಈ ಕುಟುಂಬದ ಪತಂಗಗಳು ಹಾಗೂ ಮರಿಗಳು ಅನೇಕ ಕೃಷಿ ಬೆಳೆಗಳ ಪರಾವಲಂಬಿಗಳಾಗಿದ್ದು ಗಣನೀಯ ನಷ್ಟ ಉಂಟುಮಾಡುತ್ತವೆ. ಉದಾಹರಣೆಗೆ ಪ್ಯಾಲಿಯಾಕ್ರಿಟ, ಆಲ್ಸೊಫಿಲ, ಎನೊಮಾಸ್, ಡಿಸ್‍ಟೆರಿಸ್ ಇತ್ಯಾದಿ.
(ಟ.ಎಸ್.ಟ.)
ಪರಿಷ್ಕರಣೆ:
ಡಾ|| ಎನ್. ಎಸ್. ಲೀಲಾ
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ